ಬರಹ ತನ್ನ ಅರ್ಥ, ಸೊಬಗು ಕಳೆದುಕೊಂಡ ಸಂದರ್ಭದಲ್ಲಿ ನಾವು ಕನ್ನಡ ಮಾಸ ಪತ್ರಿಕೆ ಹೊರತರುತ್ತಿದ್ದೇವೆ.
ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ಯುಗಪ್ರವರ್ತಕ ಪಲ್ಲಟ ತರುತ್ತೇವೆ ಎಂಬ ಅಸಿಮಿತ ಮಹತ್ವಾಕಾಂಕ್ಷೆ ನಮಗಿಲ್ಲ. ಆದರೆ ಕನ್ನಡ ಸಾಹಿತ್ಯ, ಸಂಸ್ಕೃತಿ ಮತ್ತು ಚಿಂತನಾಕ್ರಮದ ದಿಕ್ಕು ಬದಲಿಸುವ ನಿಟ್ಟಿನಲ್ಲಿ ಒಂದು ಸಣ್ಣ ಹೆಜ್ಜೆ ಇಡುವ ಪ್ರಯತ್ನ ನಮ್ಮದು.
ಏಕೆ ಬರಹ ತನ್ನ ಅರ್ಥ ಮತ್ತು ಸೊಬಗು ಕಳೆದುಕೊಂಡಿದೆ? ಏಕೆ ಬರಹಗಾರರು ಜನರ, ಓದುಗರ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ? ಏಕೆ ಬರಹ ಕೇವಲ ಪದಗಳ ಸಂಗ್ರಹವಾಗಿ ಕಾಣುತ್ತಿದೆ? ಈ ಬಗ್ಗೆ ಲೇಖಕರು ಮತ್ತು ಓದುಗರು ಚಿಂತಿಸದಿದ್ದರೆ ಬೇರೆ ಯಾರು ಈ ಕಡೆಗೆ ಗಮನ ಹರಿಸಲು ಸಾಧ್ಯವಿದೆ?
ಲೇಖಕರು ತಮ್ಮ ವಿಶ್ವಾತ್ಮಕತೆ ಕಳೆದುಕೊಂಡಿರುವುದೇ ಬರಹದ ವ್ಯಾಪ್ತಿ ಕುಗ್ಗಲು ಸಾಧ್ಯವಿದೆ. ವಿಶ್ವಾತ್ಮಕತೆ ಪ್ರಾಪ್ತವಾಗಲು ನಾವು ಇಂಗ್ಲಿಷ್ ಅಥವಾ ಸ್ಪ್ಯಾನಿಷ್ ಭಾಷೆಯಲ್ಲಿ ಬರೆಯಬೇಕಾಗಿಲ್ಲ. ಮನುಷ್ಯ ಕುಲಂ ತಾನೊಂದು ವಲಂ ಎಂದು ಪಂಪ ಬರೆದದ್ದು ಕನ್ನಡ ಭಾಷೆಯಲ್ಲಿ ಅಲ್ಲವೆ? ಭಾಷೆ ಒಂದು ಸೂತಕ, ಅರಿವೇ ಗುರು, ದಯವಿಲ್ಲದ ಧರ್ಮವಾವುದಯ್ಯಾ? ಎಂದು ವಚನಕಾರರು ಬರೆದದ್ದು ಇದೇ ಕನ್ನಡ ಭಾಷೆಯಲ್ಲಿ ಅಲ್ಲವೆ? ಇದಕ್ಕಿಂತ ಹೆಚ್ಚಿನ ವಿಶ್ವಾತ್ಮಕತೆ ಬೇರೆ ಯಾವ ಪಾಶ್ಚಾತ್ಯ ಲೇಖಕನ ಬರಹದಲ್ಲಿದೆ?
ಇಂಥ ವಿಶ್ವಾತ್ಮಕತೆ ನಮ್ಮ ಇತ್ತೀಚೆಗಿನ ಬರಹದಲ್ಲಿ ಕಾಣುತ್ತಿಲ್ಲ. ಲೇಖಕರು ಅತ್ಯಂತ ಸಿಮಿತ ಪ್ರಜ್ಞಾ ವಲಯದಲ್ಲಿ ನಿಂತು, ಕೇವಲ ತಮ್ಮ ಸಮಾಜ ಮತ್ತು ಸಮುದಾಯಗಳ ಆಶೋತ್ತರಗಳಿಗೆ ಬದ್ಧರಾಗಿ, ಅನ್ಯ ಸಮಾಜ ಸಮುದಾಯಗಳ ಕಾಳಜಿಗೆ ಕುರುಡಾಗಿ, ಅನ್ಯ ಸಮುದಾಯಗಳ ಮನಸ್ಸು ಮತ್ತು ಭಾವನೆಗಳಿಗೆ ಧಕ್ಕೆ ಉಂಟು ಮಾಡುವಂಥ ಬರಹದಲ್ಲಿ ತೊಡಗಿದ್ದರಿಂದ ಸಾಹಿತ್ಯ ಕೇವಲ ಸೇಡು ಮತ್ತು ಪ್ರತಿಕಾರದ ಅಭಿವ್ಯಕ್ತಿಯ ಮಾಧ್ಯಮವಾಗಿದೆ. ಇಂಥ ಸಾಹಿತ್ಯಕ್ಕೆ ಸಾರ್ವಕಾಲಿಕತೆ, ವಿಶ್ವಾತ್ಮಕತೆ ದಕ್ಕುವುದಿಲ್ಲ. ಹೀಗಾಗಿ ಅದು ತನ್ನ ಅರ್ಥವಂತಿಕೆ ಮತ್ತು ಪ್ರಸ್ತುತತೆ ಎರಡನ್ನೂ ಕಳೆದುಕೊಂಡು ಬಿಡುತ್ತದೆ.
ಲೇಖಕರು ಸರಿಯಾದ ರೀತಿಯಲ್ಲಿ ತಮ್ಮ ವ್ಯಕ್ತಿತ್ವ ಕಟ್ಟಿಕೊಳ್ಳದಿರುವುದು ಮತ್ತೊಂದು ಕಾರಣ. ಬರಹದ ನೈತಿಕತೆ ಲೇಖಕನ ನೈತಿಕತೆಯನ್ನು ಅವಲಂಬಿಸಿದೆ, ಅನುಕರಿಸುತ್ತದೆ ಮತ್ತು ಅನುಸರಿಸುತ್ತದೆ. ಈ ನೈತಿಕತೆಯನ್ನು ಬಹಳ ಸರಳವಾಗಿ, ಲೆಕ್ಕ ಬಿಡಿಸಿದಂತೆ ಹೇಳಲಾಗದು. ಲೇಖಕರು ಹಾಗಿರಬೇಕು, ಹೀಗಿರಬೇಕು ಎಂದು ಈ ಮಾತಿನ ಅರ್ಥವಲ್ಲ.
ಜನರ ನೋವಿಗೆ, ಕಷ್ಟಕ್ಕೆ ಸ್ಪಂದಿಸದ, ನಾಡು ನುಡಿಯ ಕರೆಗೆ ಓಗೂಡದ, ದೇಶದ ಸ್ಥಿರತೆ, ಒಗ್ಗಟ್ಟು ಮತ್ತು ರಕ್ಷಣೆಗೆ ನಿಲ್ಲದ, ಬದುಕಿಗೆ ಬದ್ಧವಾಗಿರದೆ ಮತ್ತು ಬರಹಕ್ಕೆ ಮಾದರಿಯಾಗಿ ಬದುಕದೆ ಹೋದರೆ ಅರ್ಥಪೂರ್ಣವಾದ ಬರಹ ಸಾಧ್ಯವಾಗುವುದಿಲ್ಲ.
ಇದಾವುದನ್ನು ಲೆಕ್ಕಿಸದೆ ಬರೆದರೆ ಆ ಬರಹ ಕೇವಲ ಶಬ್ದಗಳ ಸಮೂಹವಾಗುತ್ತದೆ. ಜೀವಂತಿಕೆ, ಲವಲವಿಕೆ, ತೀವ್ರತೆ ಕಳೆದುಕೊಂಡು ಕೇವಲ ಹಳವಂಡವಾಗಿ, ಮೃತಶಬ್ದಗಳ ಶವಾಗಾರವಾಗಿ ಕಾಣುತ್ತದೆ. ಆಗ ನಾವು ಬರೆಯುವ ಪ್ರತಿಯೊಂದು ಸಾಲು ಶೇಕ್ಸ್‌ಪಿಯರ್ ಹೇಳುವ ಹಾಗೆ ಕೇವಲ Words, words and words ಆಗಿ ಕಾಣುತ್ತದೆ.
ಬರಹ ಸತ್ತ ಪದಗಳ ಸಮೂಹವಾಗಿ ಕಾಣಬಾರದು ಮತ್ತು ಬರೆಯುವ ನಾವು ಪ್ರತಿಯೊಂದು ಸಾಲೂ ಅರ್ಥಪೂರ್ಣವಾಗಬೇಕು ಎಂದರೆ ಲೇಖಕರು ಬರಹವನ್ನು ತಪಸ್ಸು ಎಂದು ಭಾವಿಸಬೇಕು ಮತ್ತು ಗರಿಷ್ಠ ಮಟ್ಟದ ಶ್ರಮ, ತ್ಯಾಗ ಮತ್ತು ಬದ್ಧತೆ ಮೆರೆಯುವುದರ ಮೂಲಕ ತಮ್ಮ ವ್ಯಕ್ತಿತ್ವ ಮತ್ತು ತಮ್ಮ ಬರಹದ ವ್ಯಕ್ತಿತ್ವ ಕಟ್ಟಿಕೊಳ್ಳಬೇಕು. ಇಂಥ ಲೇಖಕರು ಧಾರವಾಡ ಕಟ್ಟೆ ಮಾಸ ಪತ್ರಿಕೆಯ ಮೂಲಕ ಬೆಳೆದು ಬರಲಿ ಎಂಬುದು ನಮ್ಮ ಕನಸು ಮತ್ತು ಆಶಯ.
ಪ್ರೊ ಬಸವರಾಜ ಡೋಣೂರ
ಪರುಷಕಟ್ಟೆಯ ಬಳಗದ ಪರವಾಗಿ
Nice thought