
On Swamy Vivekananda 2023
ಕಾರ್ಯಕ್ರಮ ವರದಿ
ಸ್ವಾಮಿ ವಿವೇಕಾನಂದರು ಪಾಶ್ಚಿಮಾತ್ಯರಿಗೆ ವೇದಾಂತ ಮತ್ತು ಯೋಗದ ಸಾರ ಉಣಬಡಿಸಿದ ವಿಭೂತಿಪುರುಷ: ಪ್ರವೀಣ ಕುಲಕರ್ಣಿ
ಸ್ವಾಮಿ ವಿವೇಕನಂದ ಭಾರತದ ಮೊದಲ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ರಾಯಭಾರಿ: ಬಸವರಾಜ ಡೋಣೂರ
ಭಾರತ ತನ್ನ ಸ್ವಾಭಿಮಾನವನ್ನು, ಸರ್ವಸ್ವವನ್ನು ಕಳೆದುಕೊಂಡು ಗುಲಾಮಗಿರಿ ಮತ್ತು ದಾಸ್ಯಗಳ ಸಂಕೋಲೆಗಳಲ್ಲಿ ತನ್ನತನವನ್ನು ಮರೆತು ವಿಸ್ಮೃತಿಗೆ ಸರಿದಂತಹ ಕಾಲದಲ್ಲಿ ವಿವೇಕಾನಂದರು ಜಗತ್ತಿಗೆ ಭಾರತದ ಅತ್ಯಂತ ಶ್ರೇಷ್ಠ ಚಿಂತನೆಗಳನ್ನ ಪುನರ್ ಪ್ರಚಾರ ಮಾಡುತ್ತ ಪ್ರತಿಪಾದಿಸುತ್ತ ಭಾರತದ ಮುಂದೆ ಜಗತ್ತು ತಲೆ ಬಾಗಿ ನಿಲ್ಲುವಂತೆ ಮಾಡಿದರು ಪ್ರವೀಣ ಕುಲಕರ್ಣಿ ಹೇಳಿದರು.
ಧಾರವಾಡ ಕಟ್ಟೆ ಆಯೋಜಿಸಿದ ಜಾಗತಿಕ ತತ್ವಜ್ಞಾನಿಗಳ ಉಪನ್ಯಾಸ ಮಾಲಿಕೆಯಲ್ಲಿ ‘ಸ್ವಾಮಿ ವಿವೇಕಾನಂದರು’ ಕುರಿತು ಪ್ರವೀಣ್ ಕುಲಕರ್ಣಿ ಮಾತನಾಡಿದರು.
1863 ಜನವರಿ 12 ರಂದು ವಿಶ್ವನಾಥ್ ಭಟ್ಟ ಭುವನೇಶ್ವರಿ ಎಂಬ ದಂಪತಿಗಳಿಗೆ ಜನಿಸಿದ ವಿವೇಕಾನಂದರು ಬಾಲ್ಯದಲ್ಲಿಯೇ ಅನೇಕ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆಗಳನ್ನ ರೂಡಿಸಿಕೊಂಡಿದ್ದರು. ವಿವೇಕಾನಂದರ ತಾಯಿ ಧಾರ್ಮಿಕ ಶ್ರದ್ಧೆ ಉಳ್ಳವರಾಗಿದ್ದರು. ವಿವೇಕಾನಂದರಿಗೆ ವೈಚಾರಿಕ ಚಿಂತನೆಗಳು ಬಾಲ್ಯದಿಂದಲೇ ಮೊಳಿದಿದ್ದವು. ಅವರ ವೈಚಾರಿಕ ಪ್ರವೃತ್ತಿಯಿಂದ ಅವರಲ್ಲಿ ನಿಜವಾಗಿಯೂ ದೇವರಿದ್ದಾನೆಯೇ? ಇದ್ದರೆ ಅವನ ಸ್ವರೂಪವೇನು? ಎಂಬ ಪ್ರಶ್ನೆಗಳ ಜಿಜ್ಞಾಸೆ ಬೆಳೆಯುತ್ತದೆ. ಇದೇ ಸಂದರ್ಭದಲ್ಲಿ ಸಾಮಾಜಿಕ ಪರಿವರ್ತನೆಯ ಕೆಲಸ ಮಾಡುತ್ತಿದ್ದಂತಹ ಬ್ರಹ್ಮ ಸಮಾಜವನ್ನು ಸೇರಿಕೊಂಡ ವಿವೇಕಾನಂದರು ಅಲ್ಲಿಯೂ ಈ ಪ್ರಶ್ನೆಗಳನ್ನ ಎತ್ತಿದರು. ಆದರೆ ಸಮರ್ಪಕವಾದ ಉತ್ತರ ಸಿಗದೆ ಸ್ವಯಂ ಅನ್ವೇಷಣೆಯಲ್ಲಿ ಉತ್ತರವನ್ನು ಕಂಡುಕೊಳ್ಳಲು ಪ್ರಾರಂಭಿಸಿದರು. ಇಂತಹ ಸಂದರ್ಭದಲ್ಲಿ ಅವರ ಸಂಬಂಧಿ ರಾಮಕೃಷ್ಣ ಪರಮಹಂಸರ ಬಗ್ಗೆ ಪರಿಚಯಿಸುತ್ತ ದೇವರ ಬಗ್ಗೆ ಅವರನ್ನು ಕೇಳಿದರೆ ಏನಾದರೂ ಸಲಹೆ ಸಿಗಬಹುದು ಎಂದು ವಿವೇಕಾನಂದರಿಗೆ ಹೇಳಿದರು. ಪರಮಹಂಸರನ್ನು ಪರಿಚಯಿಸಿ ಅವರನ್ನು ಸೇರಿಕೊಳ್ಳುವಂತೆ ಮಾಡುತ್ತಾರೆ. ವಿವೇಕಾನಂದರು ಪರಮಹಂಸರನ್ನು ಭೇಟಿಯಾದಾಗ ಅನೇಕ ದಿನಗಳ ನಂತರ ಒಬ್ಬ ಮಗು ತನ್ನ ತಾಯಿಯನ್ನು ಸೇರಿದ ಅನುಭವವನ್ನು ಇಬ್ಬರಲ್ಲೂ ಆಗುತ್ತದೆ ಎಂಬ ಮಾತನ್ನು ಕುಲಕರ್ಣಿ ಉಲ್ಲೇಖಿಸಿದರು. ವಿವೇಕಾನಂದರು ದೇವರ ಬಗ್ಗೆ ಇರುವ ಪ್ರಶ್ನೆಯನ್ನು ಪರಮಹಂಸರಲ್ಲಿ ಕೇಳಿದಾಗ ಪರಮಹಂಸರು “ನಾನು ಎಷ್ಟು ಸ್ಪಷ್ಟವಾಗಿ ನಿನ್ನೊಂದಿಗೆ ಮಾತನಾಡುತ್ತೇನೋ, ನಿನ್ನನ್ನು ನೋಡುತ್ತೇನೋ ಅಷ್ಟೇ ಸ್ಪಷ್ಟವಾಗಿ ನಾನು ದೇವರೊಂದಿಗೂ ಮಾತನಾಡಿದ್ದೇನೆ, ದೇವರನ್ನು ನೋಡಿದ್ದೇನೆ” ಎಂದು ಹೇಳುತ್ತಾರೆ.
ಆದರೆ ವಿವೇಕಾನಂದರ ಮನಸ್ಸಿನಲ್ಲಿ ಮೂಡಿದ ಅನುಮಾನ ತಮ್ಮ ಗುರುಗಳನ್ನೇ ಪರೀಕ್ಷೆ ಮಾಡಲು ವಿವೇಕಾನಂದರಿಗೆ ಉತ್ತೇಜನ ನೀಡುತ್ತದೆ. ಇಂತಹ ವ್ಯಕ್ತಿತ್ವವನ್ನ ಬಾಲ್ಯದಲ್ಲಿಯೇ ವಿವೇಕಾನಂದರು ಹೊಂದಿದ್ದರು.
ರಾಮಕೃಷ್ಣ ಪರಮಹಂಸರು ಮತ್ತು ವಿವೇಕಾನಂದರು ಸಂಪೂರ್ಣವಾಗಿ ಒಂದಾಗಿ ಬಿಟ್ಟಿದ್ದರು. ರಾಮಕೃಷ್ಣ ಪರಮಹಂಸರು ತಾವು ಮಹಾ ಸಮಾಧಿಯನ್ನು ತಲುಪುವ ಒಂದಿಷ್ಟು ದಿನಗಳ ಹಿಂದೆ ಇಬ್ಬರೂ ಕೂತುಕೊಂಡು ಪರಸ್ಪರ ದಿಟ್ಟಿಸಿ ನೋಡಿಕೊಳ್ಳುತ್ತಾರೆ. ಆ ಸಂದರ್ಭದಲ್ಲಿ ಪರಮಹಂಸರ ಕಣ್ಣಲ್ಲಿ ಯಾವುದೋ ಒಂದು ಶಕ್ತಿ ನರೇಂದ್ರರನ್ನು ಆಕರ್ಷಿಸುತ್ತದೆ. ಅದನ್ನು ತಡೆದುಕೊಳ್ಳಲಾಗದೆ ನರೇಂದ್ರರು ಮೂರ್ಚಿತರಾಗುತ್ತಾರೆ. ಮೂರ್ಚೆಯಿಂದ ಎದ್ದಾಗ ವಿವೇಕಾನಂದರಿಗೆ ಪರಮಹಂಸರು ಗಳಗಳನೆ ಅಳುತ್ತಿರುವು ಕಂಡು ಅಚ್ಚರಿಯಾಗುತ್ತದೆ. ಯಾಕೆ ಅಳುತ್ತಿರುವಿರೆಂದು ಕೇಳಿದಾಗ, ಪರಮಹಂಸರು ‘ನನ್ನ ಜೀವನದ ಉದ್ದಕ್ಕೂ ಯಾವ ಶಕ್ತಿಗಳನ್ನು ಗಳಿಸಿದ್ದೇನೋ ಆ ಎಲ್ಲಾ ಶಕ್ತಿಗಳನ್ನು ನಿನಗೆ ಧಾರೆ ಎರೆದಿದ್ದೇನೆ. ಈಗ ನಿನ್ನ ಮುಂದೆ ನಾನು ಭಿಕ್ಷುಕನಂತೆ ನಿಂತಿದ್ದೇನೆ. ನನ್ನಲ್ಲಿ ಏನೂ ಯಾವ ಶಕ್ತಿಯೂ ಉಳಿದಿಲ್ಲ” ಎಂದು ಹೇಳುತ್ತಾರೆ.
ಸ್ವಾಮಿ ವಿವೇಕಾನಂದರ ಜೀವನದಲ್ಲಿ ನಡೆದ ಪ್ರಮುಖ ಮೂರು ಘಟನೆಗಳನ್ನ ನೋಡಬಹುದು. 1888-1892 ರವರೆಗೆ ಈ ನಾಲ್ಕು ವರ್ಷದಲ್ಲಿ ಭಾರತದ ಉತ್ತರ ಭಾಗದ ಬಾರನಗರದಿಂದ ನಡೆದುಕೊಂಡು ಕನ್ಯಾಕುಮಾರಿಯವರೆಗೆ ಬರುತ್ತಾರೆ. ಎರಡನೆಯದಾಗಿ 1893- 1896ರಲ್ಲಿ ಅಮೆರಿಕಾಕ್ಕೆ ಹೋಗಿ ಮೂರು ವರ್ಷಗಳ ಕಾಲ ಅಲ್ಲಿದ್ದುಕೊಂಡು ಮರಳಿ ಭಾರತಕ್ಕೆ ಬರುತ್ತಾರೆ. ಇದನ್ನು ನಾವು ದಿಗ್ವಿಜಯದ ಯಾತ್ರೆಯೆಂದು ಕರೆಯಬಹುದು. ಭಾರತದ ಹಿಂದುತ್ವದ ಕುರಿತು ಪ್ರಸಾರ ಮಾಡಿ ಭಾರತವನ್ನು ಒಪ್ಪುವಂತೆ ಮಾಡುತ್ತಾರೆ. ಮೂರನೆಯದಾಗಿ 1896ರಲ್ಲಿ ಭಾರತಕ್ಕೆ ಬಂದಿಳಿದ ನಂತರ ವಿವೇಕಾನಂದರು ಕೊಲಂಬೊದ ಉತ್ತರಕ್ಕೆ ಯಾತ್ರೆ ಮಾಡುತ್ತಾರೆ. ಹೀಗೆ ಮೂರು ಕಾಲಘಟ್ಟಗಳಲ್ಲಿ ಅವರು ಹಿಂದುತ್ವ ಪ್ರಸಾರ ಮಾಡಿದರು ಎಂದು ಕುಲಕರ್ಣಿಯವರು ಹೇಳಿದರು.
ಭಾರತ ಸಂಸ್ಕೃತಿಯ ತೊಟ್ಟಿಲು ಎಂಬಂಥ ಗೌರವ ನಮ್ಮ ದೇಶಕ್ಕಿದೆ. ಆದರೆ ಇಂತಹ ದೇಶಕ್ಕೆ ಏನಾಗಿದೆ, ಎಂತಹ ಪರಿಸ್ಥಿತಿ ಒದಗಿದೆ ಎಂದು ಆಲೋಚಿಸಿ ಇದಕ್ಕೆ ಭಾರತೀಯರಲ್ಲಿ ಮೂಡಿದ ಆತ್ಮವಿಸ್ಮೃತಿಯೆ ಕಾರಣ ಎಂಬುದನ್ನು ವಿವೇಕಾನಂದರು ಕಂಡುಕೊಂಡು ಅದಕ್ಕೆ ಚಿಕಿತ್ಸೆಯನ್ನು ನೀಡಲು ತಮ್ಮದೇ ಆಲೋಚನೆಗಳನ್ನು ಮುಂದಿಡುತ್ತಾರೆ. ಭಾರತದಲ್ಲಿನ ರೂಢಿಗಳು ಸ್ತ್ರೀಯರ ಮೇಲಾಗುವ ಶೋಷಣೆ ದೀನ ದುಃಖಿತರ ಮೇಲಾಗುವ ಶೋಷಣೆ ಅಸ್ಪೃಶ್ಯ ಅಸ್ಪೃಶ್ಯತೆ ಅವರಿಗೆ ತುಂಬ ನೋವು ಕೊಟ್ಟಂಥ ಸಂಗತಿಗಳೆಂದು ಕುಲಕರ್ಣಿಯವರು ಹೇಳಿದರು.
ನಮ್ಮ ದೇಶದಲ್ಲಿ ದಾರಿದ್ರ್ಯವಿದೆ, ದುಃಖವಿದೆ ದೈನತೆವಿದೆ. ಆದರೆ ಇಷ್ಟೆಲ್ಲ ಇದ್ದರೂ ಅಲ್ಲಿ ಅಮೋಘವಾದ ಆಧ್ಯಾತ್ಮ ಸಂಪತ್ತು ಇದೆ. ಈ ಕಾರಣಕ್ಕಾಗಿ ಚಿಕಾಗೋದಲ್ಲಿ ನಡೆಯುವ ಧರ್ಮ ಸಮ್ಮೇಳನಕ್ಕೆ ನಾನು ಹೋಗಬೇಕು. ಆ ಧರ್ಮ ಸಮ್ಮೇಳನ ನನಗೋಸ್ಕರ ಕಾಯುತ್ತಿದೆ ಎಂದು ವಿವೇಕಾನಂದರು, ತಮ್ಮ ರಾಷ್ಟ್ರೀಯತೆ ಧರ್ಮ ಅಭಿಮಾನ ವ್ಯಕ್ತಪಡಿಸಿದರು.
ಅಮೆರಿಕಕ್ಕೆ ಹೋಗುತ್ತೇನೆ ಎಂದು ಪಶ್ಚಿಮ ದೇಶದಲ್ಲಿ ಮನಶಾಂತಿಗಾಗಿ ಹುಡುಕಾಡುತ್ತಿದ್ದಾರೆ. ಭೌತಿಕದಲ್ಲಿ ಸಿಲುಕಿ ನರಳುತ್ತಿದ್ದಾರೆ .ಅವರಿಗಾಗಿ ನಾನು ಹೋಗಲೇಬೇಕ, ಅವರಿಗೆ ನಮ್ಮ ದೇಶದ ಅಧ್ಯಾತ್ಮವನ್ನು ಹೇಳಿಕೊಡುತ್ತೇನೆ ,ಇದು ನನ್ನ ಕರ್ತವ್ಯವಾಗಿದೆ ಎಂದು ವಿವೇಕಾನಂದರು ಹೇಳುತ್ತಾರೆ. ಅಲ್ಲಿಂದ ತಂದ ಜ್ಞಾನದ ಸಹಾಯದಿಂದ ನನ್ನ ದೇಶದ ದಾರಿದ್ರ್ಯವನ್ನು ದೈನತೆಯನ್ನ ಅಸಾಮಾನ್ಯತೆಗಳನ್ನ ಶೋಷಣೆಯನ್ನು ದೂರ ಮಾಡುತ್ತೇನೆ ಎಂದು ವಿವೇಕಾನಂದರು ಹೇಳಿದರು.
1909ರಲ್ಲಿ ಟಾಟಾ ವಿವೇಕಾನಂದರ ಆಲೋಚನೆಗಳ ಪ್ರೇರಣೆಯಿಂದಾಗಿ ಟಾಟಾ ಇನ್‌ಸ್ಟಿಟ್ಯೂಟ್ ಪ್ರಾರಂಭ ಮಾಡುತ್ತಾರೆ. ನಂತರದ ಕೆಲವೇ ವರ್ಷಗಳಲ್ಲಿ 1911ರಲ್ಲಿ ಟಾಟಾ ಇನ್‌ಸ್ಟಿಟ್ಯೂಟ್ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಆಗಿ ಪರಿವರ್ತಿತವಾಗುತ್ತದೆ. ಇಂದಿಗೂ ಈ ಸಂಸ್ಥೆ ವಿಜ್ಞಾನ ತಂತ್ರಜ್ಞಾನದ ಬೆಳವಣಿಗೆಗೆ ಕೆಲಸ ಮಾಡುತ್ತಲೇ ಬಂದಿರುವುದನ್ನ ನೋಡಿದರೆ ಇದಕ್ಕೆ ಪ್ರೇರಣೆ ಸಿಕ್ಕಿದ್ದು ವಿವೇಕಾನಂದರಿಂದ ಎಂದು ಕುಲಕರ್ಣಿ ಹೇಳಿದರು.
ವಿವೇಕಾನಂದರು ಜೀವನದಲ್ಲಿ ಎಲ್ಲಾ ಕಡೆಯಿಂದಲೂ ಕಷ್ಟಗಳನ್ನ ಅನುಭವಿಸಿದವರೇ. ಆದರೆ ಎಲ್ಲಿಯೂ ಕೂಡ ಅವರ ಜೀವನದಲ್ಲಿ ಋಣಾತ್ಮಕ ಚಿಂತನೆಗಳು ಕಂಡು ಬಂದಿಲ್ಲ; ಎಲ್ಲಾ ಕಷ್ಟಗಳನ್ನ ಧೈರ್ಯದಿಂದಲೇ ಎದುರಿಸುತ್ತಲೇ ಬಂದವರು, ತಮ್ಮ ಗುರಿಗಳನ್ನು ಸಾಧಿಸಿಕೊಂಡರು. ಇದಕ್ಕೆ ಅವರಲ್ಲಿನ ಭಾರತೀಯ ಧನಾತ್ಮಕ ಚಿಂತನೆಗಳೇ ಕಾರಣ ಎಂದು ಕುಲಕರ್ಣಿ ಹೇಳಿದರು.
ಹಾಗೆ ಚಿಕಾಗೋದಲ್ಲಿ ವಿವೇಕಾನಂದರು ಒಂದು ಅಪರೂಪದ ಘಟನೆಯನ್ನು ಉಲ್ಲೇಖಿಸುತ್ತ ವಿವೇಕಾನಂದರು ಕ್ಯಾಥರಿನ್ ಎಂಬ ಮಹಿಳೆಯ ಮನೆಯಲ್ಲಿ ಉಳಿಯುತ್ತಾರೆ. ಅಲ್ಲಿ ಅನೇಕ ಮಹಾಪುರುಷರು ಬುದ್ಧಿಜೀವಿಗಳು ತತ್ವಜ್ಞಾನಿಗಳು ಸೇರಿಕೊಂಡಿರುತ್ತಾರೆ. ಅಂತವರಲ್ಲಿ ಜಾನ್ ಹೆನ್ರಿ ರೈಟ್ ಎಂಬುವರ ಪರಿಚಯ ವಿವೇಕನಂದರಿಗೆ ಆಗುತ್ತದೆ. ವಿವೇಕಾನಂದರು ತಾವು ಬಂದ ಉದ್ದೇಶವನ್ನು ಜಾನ್ ಹೆನ್ರಿ ರೈಟ್‌ಗೆ ತಿಳಿಸಿದಾಗ ಜಾನ್ ಹೆನ್ರಿ ರೈಟ್ ಅವರು ಅತ್ಯಂತ ಪ್ರೀತಿಯಿಂದ ಸ್ವಾಗತಿಸಿಕೊಂಡು ನಿಮ್ಮಂಥವರಿಗೆ ಪರಿಚಯ ಪತ್ರ ಬೇಕೆ ಎಂದು ಹೇಳುತ್ತಾ ನಾನು ಆ ಪರಿಚಯ ಪತ್ರವನ್ನು ಬರೆದುಕೊಡುತ್ತೇನೆ ಎಂದು ಒಂದು ಪರಿಚಯ ಪತ್ರವನ್ನು ಬರೆದುಕೊಡುತ್ತಾರೆ. ಆ ಪರಿಚಯದಲ್ಲಿರುವ ಮಾತುಗಳು ಹೀಗಿವೆ ” ಈ ಧರ್ಮ ಸಮ್ಮೇಳನಕ್ಕೆ ಬಂದ ಮಹನೀಯರ, ಬುದ್ಧಿಜೀವಿಗಳ ಮತ್ತು ತತ್ವಜ್ಞಾನಿಗಳನ್ನು ತಕ್ಕಡಿಯ ಒಂದು ಕಡೆ ಹಾಕಿದರೆ ಅವರೆಲ್ಲರಿಗೂ ಸಮಾನವಾಗಿ ನಿಲ್ಲುವ ಒಬ್ಬ ವ್ಯಕ್ತಿ ವಿವೇಕಾನಂದರು. ಅವರನ್ನು ನಾನು ಕಳುಹಿಸುತ್ತಿದ್ದೇನೆ.”
ಜೊತೆಗೆ ವಿವೇಕಾನಂದರು ಚಿಕಾಗೋ ಧರ್ಮ ಸಮ್ಮೇಳನದಲ್ಲಿ ಹೇಳಿದ ಅನೇಕ ಮಾತುಗಳನ್ನು ಉಲ್ಲೇಖಿಸುತ್ತ ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವಂತಹ ಮಾತುಗಳನ್ನು ಈ ಉಪನ್ಯಾಸದಲ್ಲಿ ಅವರು ಪ್ರಸ್ತಾಪಿಸಿದರು. “ಭೂಮಿಯ ಮೇಲೆ ಬಿದ್ದ ಮಳೆ ಹನಿ ನೀರು ಹಳ್ಳಕ್ಕೆ ಸೇರಿ ಹಳ್ಳದಿಂದ ನದಿ ಸೇರಿ ನದಿಯ ಮೂಲಕ ಹೇಗೆ ಸಮುದ್ರವನ್ನು ಸೇರುತ್ತವೆಯೋ ಹಾಗೆ ಎಲ್ಲಾ ಜಾತಿ ಧರ್ಮ ಮತ ಪಂಥಗಳು ಯಾವ ದೇವರಲ್ಲಿ ಪೂಜಿಸಲಿ ಕೊನೆಗೆ ಸಮುದ್ರವನ್ನು ತಲುಪಿದ ಹಾಗೆ ಎಲ್ಲರೂ ಆ ಪರಮಾತ್ಮನನ್ನೇ ಸೇರುತ್ತಾರೆ ಎಂಬ ನಂಬಿಕೆ ನಮ್ಮ ಭಾರತೀಯರದ್ದು” ಎಂದುಭಾರತೀಯ ಜಾತಿ ಧರ್ಮ ಮತ ಪಂಥಗಳನ್ನು ಸಮಸಮ ನೆಲೆಯಲ್ಲಿ ಗುರುತಿಸಿ ಮಾತನಾಡುತ್ತಾರೆ.
ವಿವೇಕಾನಂದರ ಚಿಂತನೆಗಳಿಂದ ಪ್ರಭಾವಕ್ಕೆ ಒಳಗಾಗಿ ತಮ್ಮದೇ ಶಿಷ್ಯರನ್ನು ಭಾರತಕ್ಕೆ ಕರೆಸಿಕೊಳ್ಳುವುದರ ಮೂಲಕ ಭಾರತದಲ್ಲಿನ ಅನೇಕ ಮೌಢ್ಯಗಳನ್ನು ಸುಧಾರಿಸುವ ಕೆಲಸ ಮಾಡುತ್ತಾರೆ. ಅಂತವರಲ್ಲಿ ಕ್ಯಾಪ್ಟನ್ ಜೈ ಭೀಮ್ ಮತ್ತು ಅವರ ಪತ್ನಿ ಮತ್ತು ನಿವೇದಿತಾ ಅನೇಕರು ಭಾರತಕ್ಕೆ ಬಂದು ನೆಲಿಸುತ್ತಾರೆ. ವಿವೇಕಾನಂದರು ಅಲ್ಮೊರದಲ್ಲಿ ಒಂದು ಆಶ್ರಮವನ್ನು ಸ್ಥಾಪಿಸುತ್ತಾರೆ ಆ ಮೂಲಕ ಸಮಾಜವನ್ನು ಸುಧಾರಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಾರೆ. ಕೊನೆಗೆ ತನ್ನ ತಾಯಿ ಅನಾರೋಗ್ಯದಿಂದ ಬಳಲುವಾಗ ಆಶ್ರಮದಲ್ಲಿ ಇಟ್ಟುಕೊಂಡು ಅವರ ಸೇವೆಯನ್ನ ಮಾಡುತ್ತಾರೆ. ತಾಯಿ ಎಲ್ಲರಿಗಿಂತಲೂ ಮಿಗಿಲು ಎಂಬ ಮಾತನ್ನು ಮತ್ತು ಸನ್ಯಾಸಿಯು ತಾಯಿಗಿಂತಲೂ ದೊಡ್ಡವನಾಗಿರಲಾರನು ಎಂಬ ಮಾತನ್ನು ಈ ಸಂದರ್ಭದಲ್ಲಿ ಅವರು ಜೀವನದುದ್ದಕ್ಕೂ ಪ್ರತಿಪಾದಿಸಿದರು ಎಂದು ಕುಲಕರ್ಣಿಯವರು ಹೇಳಿದರು.
ಧಾರವಾಡ ಕಟ್ಟೆಯ ಗೌರವ್ಯಾಧ್ಯಕ್ಷರಾದ ಪ್ರೊ. ಬಸವರಾಜ ಡೋಣೂರ ಮಾತನಾಡಿ ಈ ಹೊತ್ತಿನಲ್ಲಿ ವಿವೇಕಾನಂದ ಮತ್ತು ಪರಮಹಂಸರ ಬಗೆಗೆ ಮಾತನಾಡುವುದು, ಸನಾತನ ಧರ್ಮದ ಹಾಗೂ ಹಿಂದೂ ಧರ್ಮದ ಬಗೆಗೆ ವಿವೇಕಾನಂದರು ಆಡಿದ ಮಾತುಗಳನ್ನ ಪುನರುಚ್ಚರಿಸುವುದು ಸಾಹಸದ ಮತ್ತು ಕಷ್ಟದ ಕೆಲಸವಾಗಿದೆ. ದೇಶದಲ್ಲಿ ಇಂಥ ಮಾತುಗಳನ್ನು ಆಡಲು ಪೂರಕ ವಾತಾವರಣವಿಲ್ಲ. ವಿದ್ವಾಂಸರು, ಬುದ್ದಿಜೀವಿಗಳು ಎಂದು ಕರೆಸಿಕೊಂಡವರು ಧರ್ಮದ ಬಗೆಗೆ ಆಡಬಾರದ ಮಾತುಗಳನ್ನು ಆಡುತ್ತಿದ್ದಾರೆ. ಇಂಥ ಸಂಕೀರ್ಣ ಸಂದರ್ಭದಲ್ಲಿ ನಾವು ಹೇಗೆ ಇಂಥ ಮಹನೀಯರ ಕುರಿತು ಚರ್ಚೆಯನ್ನು ಮಾಡಬೇಕು ಎಂಬ ಪ್ರಶ್ನೆ ಕಾಡುತ್ತದೆ. “ಸನಾತನ ಧರ್ಮ ವೈರಸ್ ಇದ್ದಂತೆ ” , ‘ಹಿಂದೂ ಧರ್ಮವನ್ನು ಈ ನೆಲದಿಂದ ಓಡಿಸಬೇಕು” ಎಂದು ನೆರೆಯ ರಾಜ್ಯದ ರಾಜಕಾರಣಿ ಹೇಳಿದ ಮಾತು ಮತ್ತು ಕರ್ನಾಟಕದ ಒಬ್ಬ ಸ್ವಾಮಿಗಳು “ಗಣಪತಿ ಪೂಜೆ ಮಾಡಬಾರದು, ಅದು ನಮ್ಮ ಸಂಸ್ಕೃತಿ ಅಲ್ಲ” ಎಂಬ ಹೇಳಿಕೆಯನ್ನು ನೀಡುವುದು ಭಾರತವನ್ನು ಒಡೆಯುವ ಶಕ್ತಿಗಳಿಗೆ ಪ್ರೇರಣೆ ನೀಡುತ್ತವೆ. ಸಮಾಜವನ್ನು, ಸಮುದಾಯವನ್ನು, ಧರ್ಮವನ್ನು ಮತ್ತು ಜಾತಿಯನ್ನು ಒಡೆಯುವಂಥ ಕೆಲಸ ಯಾರೂ ಮಾಡಬಾರದು. ಇದು ದೇಶವನ್ನು ಒಡೆದಂತೆಯೇ ಸರಿ. ಏಕೆಂದರೆ ಭಾರತಕ್ಕೆ ತನ್ನದೇ ಆದ ಸ್ವಭಾವ, ಚರಿತ್ರೆ ಮತ್ತು ಪರಂಪರೆ ಇದೆ. ಇಲ್ಲಿ ವಾಸಿಸುವ ನಾವೆಲ್ಲರೂ ವಿಸ್ತೃತವಾದ ಸಂಸ್ಕೃತಿಯ ಮತ್ತು ಪರಂಪರೆಯ ಭಾಗವಾಗಿ ಬದುಕುತ್ತಲೇ ಬಂದಿವೆ. ಇಲ್ಲಿ ಬಹುತ್ವವಿದೆ; ಇದನ್ನು ನಾವು ತಳ್ಳಿ ಹಾಕುವಂತಿಲ್ಲ. ಆದರೆ ಈ ಬಹುತ್ವ ದೇಶದ ವಿಘಟನೆ, ಒಡಕಿಗೆ ಮತ್ತು ಕೆಡಕಿಗೆ ಕಾರಣವಾಗಬಾರದು.
ಪ್ರತಿಯೊಂದು ಧರ್ಮದಲ್ಲೂ ನ್ಯೂನತೆಗಳು ಇರುತ್ತವೆ. ಧರ್ಮಗ್ರಂಥಗಳಲ್ಲಿ ಕೊರತೆಗಳು ಇರುತ್ತವೆ. ಆಚರಣೆಗಳಲ್ಲಿ ತೊಡಕುಗಳು ಇರುತ್ತವೆ. ವಿವೇಕಾನಂದರು ಸಮಸಮಾಜದ ಕನಸು ಕಂಡರು. ಜಾತಿಯ ಬಗೆಗೆ ಮತ್ತು ಅಸ್ಪೃಶ್ಯತೆಯ ನಿವಾರಣೆಯ ಬಗೆಗೆ ಏನೆಲ್ಲಾ ಕೆಲಸಗಳನ್ನ ಮಾಡಿದರು. 1947ರ ನಂತರವೇ ಜಾತ್ಯತೀತತೆ ಬಂದಿತು ಎಂಬ ಮಾತಿನಲ್ಲಿ ಸತ್ಯವಿಲ್ಲ. ಭಾರತ ಯಾವಾಗಲೂ ಇಂಥ ಮೌಲ್ಯಗಳನ್ನು ಪ್ರತಿಪಾದಿಸಿದೆ ಮತ್ತು ಅಸ್ಪೃಶ್ಯತೆಯ ವಿರುದ್ಧ ಮತ್ತು ಮೇಲು-ಕೀಳುಗಳ ವಿರುದ್ಧ ಕೆಲಸ ಮಾಡುತ್ತಲೇ ಬಂದಿದೆ ಎಂದು ಡೋಣೂರ ಹೇಳಿದರು.
ಮೂಲಭೂತವಾಗಿ ಭಾರತದ ಧರ್ಮ ಸನಾತನ ಧರ್ಮವಾಗಿದೆ ಎಂದು ಹೇಳಿದರೆ ಯಾರೂ ವಿಶೇಷವಾದ ಅರ್ಥವನ್ನು ಕಲ್ಪಿಸಿಕೊಳ್ಳುವ ಅವಶ್ಯಕತೆವಿಲ್ಲ. ಏಕೆಂದರೆ ಅದು ಈ ನಾಡಿನ ಧರ್ಮ ಮತ್ತು ಭಾರತದ ಮೂಲ ಧರ್ಮವಾಗಿದೆ. ಇದು ಹಿಂಸೆಯನ್ನು ಪ್ರತಿಪಾದಿಸುವುದಿಲ್ಲ. ಅರಾಜಕತೆಯನ್ನು ಪ್ರತಿಪಾದಿಸುವುದಿಲ್ಲ ,ಜಾತಿ-ಜಾತಿಗಳ ನಡುವೆ ಮತ್ತು ಧರ್ಮ- ಧರ್ಮಗಳ ನಡುವೆ ಅಡ್ಡಗೋಡೆಗಳನ್ನು ನಿರ್ಮಾಣ ಮಾಡುವುದಿಲ್ಲ. ಜಗತ್ತಿಗೆ ಶಾಂತಿಮಂತ್ರವನ್ನು ಬೋಧಿಸಿದ ಧರ್ಮವೇ ಹಿಂದೂ ಧರ್ಮ ಎಂದು ಡೋಣೂರ ಹೇಳಿದರು.
ವಿವೇಕಾನಂದರು ಕೇವಲ ಸನ್ಯಾಸಿ ಮಾತ್ರವಾಗಿರಲಿಲ್ಲ, ಅವರೊಬ್ಬ ಭಾರತೀಯತ್ವದ ಪ್ರಜ್ಞೆಯುಳ್ಳ ಪ್ರಖರ ರಾಷ್ಟ್ರೀಯತೆಯ ಪ್ರತಿಪಾದಕರೂ ಆಗಿದ್ದರು. ವಸಾಹತೋತ್ತರ ಆಡಳಿತಕ್ಕೆ ಒಳಪಟ್ಟ ಸಂದರ್ಭದಲ್ಲಿ ಅದರ ವಿರುದ್ಧ ಭಾರತೀಯರನ್ನು ಬೌದ್ಧಿಕವಾಗಿ ಸಿದ್ಧಗೊಳಿಸಬೇಕಿತ್ತು, ವಿವೇಕಾನಂದರು ಈ ಕೆಲಸ ಮಾಡಿದರು. ಧರ್ಮವನ್ನು ಸುಧಾರಣೆ ಮಾಡುವ ಕೆಲಸವನ್ನು, ಭಾರತವನ್ನು ಆಧುನೀಕರಣ ಗೊಳಿಸುವ ಕೆಲಸವನ್ನು ಸ್ವಾಮಿ ವಿವೇಕಾನಂದರು ಮಾಡಿದರು ಎಂದು ಹೇಳುತ್ತ ವಿಶ್ವದಲ್ಲಿರುವ ಶಕ್ತಿ ಸಾಮರ್ಥ್ಯ ಸಮಗ್ರವಾಗಿ ನಮ್ಮಲ್ಲಿದೆ ಎಂದು ಹೇಳಿದರು. ಈ ಶಕ್ತಿ ಸಾಮರ್ಥ್ಯಗಳು ನಮ್ಮಲ್ಲಿ ಮೂಡಬೇಕೆಂದರೆ ವಿವೇಕಾನಂದ- ಪರಮಹಂಸನಂಥವರ ಅನುಗ್ರಹ ಬೇಕು. ಆದರೆ ಅಂಥವರನ್ನು ಹುಡುಕಿಕೊಂಡು ನಾವು ಹೊರಟಿಲ್ಲ. ಬದಲಾಗಿ ಸಮಾಜವನ್ನು ಒಡೆಯುವವರನ್ನ ಹಿಂಬಾಲಿಸುತ್ತಿದ್ದೇವೆ ಅವರ ಮಾತುಗಳಿಗೆ ಚಪ್ಪಾಳೆ ತಟ್ಟುತ್ತಿದ್ದೇವೆ. ಇಂಥ ಅನೇಕ ಸಂಗತಿಗಳು ಅನೇಕ ರಾಜ್ಯದಲ್ಲಿ ವ್ಯವಸ್ಥಿತವಾಗಿ ನಡೆದಿವೆ. ಭಾರತೀಯ ಮೂಲದ ಧರ್ಮ ಮತ್ತು, ಆಧ್ಯಾತ್ಮಿಕ ಶಕ್ತಿಯ ವಿರುದ್ಧ ಪಿತೂರಿ ನಡೆದದ್ದು ವಾಸ್ತವ. ಹೀಗಾಗಿ ಭಾರತೀಯರು ಎಚ್ಚೆತ್ತುಕೊಳ್ಳಬೇಕು.
“Why good man suffers at all” ಎಂದು ವಿವೇಕಾನಂದರು ಪರಮಹಂಸರನ್ನು ಕೇಳಿದರು. ಒಳ್ಳೆಯವರು ಯಾಕೆ ಕಷ್ಟ ಪಡುತ್ತಾರೆ ? ಒಳ್ಳೆಯವರೇ ಯಾಕೆ ಬಳಲುತ್ತಾರೆ ? ಒಳ್ಳೆಯವರೇ ಕಷ್ಟಗಳನ್ನ ಏಕೆ ಎದುರಿಸುತ್ತಾರೆ? ಎಂಬ ಶಿಷ್ಯನ ಪ್ರಶ್ನೆಗೆ ಗುರು ಉತ್ತರಿಸಿದ್ದು ಹೀಗೆ: “Diamond cannot purified without friction and gold cannot be purified without gold”. ಅಂದರೆ ಘರ್ಷಣೆಗೆ ಒಳಗಾಗದೆ ವಜ್ರ ಪರಿಶುದ್ಧವಾಗುವುದಿಲ್ಲ ಎಂಬ ಮಾತನ್ನು ಗಮನಿಸಬೇಕು. ಒಳ್ಳೆಯವರಿಗೆ ಅನೇಕ ಕಷ್ಟಗಳು ಎದುರಾಗುತ್ತವೆ, ಹೆಜ್ಜೆ ಹೆಜ್ಜೆಗೂ ಒಳ್ಳೆಯ ಕೆಲಸ ಮಾಡುವವರು ವಿರೋಧಗಳನ್ನು ಎದಿರಿಸಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ಸಾಧಕ ಸೋಲಬಾರದು, ಧೃತಿಗೆಡಬಾರದು, ಕಷ್ಟಗಳನ್ನು ಸಮಾಧಾನ ಚಿತ್ತದಿಂದಲೇ ಎದುರಿಸಬೇಕು, ವಿವೇಕಾನಂದರ ಹಾಗೆ ಜೀವನದ ಗುರಿಗಳನ್ನು ಮುಟ್ಟಬೇಕು ಎಂದು ಡೋಣೂರ ಹೇಳಿದರು.
ಈ ಕಾರ್ಯಕ್ರಮದಲ್ಲಿ ವಿಜಯಕುಮಾರ ಕಟಿಗಿಹಳ್ಳಿಮಠ, ಮುಕುಂದ ಲಮಾಣಿ, ರಾಜಶ್ರೀ, ಗೌರಮ್ಮ, ರೇವಣ್ಣಯ್ಯ, ಸಂಗನಗೌಡ ಉಪಸ್ಥಿತರಿದ್ದರು. ಸದಸ್ಯ ಕಾರ್ಯದರ್ಶಿ ಸಿದ್ದಣ್ಣ ವಾಡೆದ ನಿರೂಪಿಸಿದರು. ವಿಜಯಲಕ್ಷ್ಮಿ ದಾನರಡ್ಡಿ, ಡಾ. ಪ್ರಕಾಶ್ ಸಿ. ಬಾಳಿಕಾಯಿ, ಶಿವರಾಜ ಸಣಮನಿ, ಪ್ರಕಾಶ ಬಾಳಿಕಾಯಿಪ್ರತಿಭಾ ದಾನರಡ್ಡಿ, ಡಾ.ಬಸಯ್ಯಸ್ವಾಮಿ, ಸಂಗಮೇಶ. ಎಸ್., ತಾಂತ್ರಿಕ ನೆರವು ನೀಡಿದರು
