ಕನ್ನಡ ರಾಜ್ಯೋತ್ಸವ

ಕನ್ನಡ ರಾಜ್ಯೋತ್ಸವ

ಕನ್ನಡ ರಾಜ್ಯೋತ್ಸವ

by
22 22 people viewed this event.

ಕಾರ್ಯಕ್ರಮ ವರದಿ

  • ಕನ್ನಡಿಗರು ಕನ್ನಡವನ್ನು ಎಲ್ಲಾ ಕ್ಷೇತ್ರಗಳಲ್ಲಿ ಬಳಸುವುದರ ಮೂಲಕ ಕನ್ನಡ ಭಾಷೆ ಬೆಳೆಸಬೇಕು- ಶ್ರೀನಿವಾಸ ವಾಡಪ್ಪಿ
  • ದೇಶದ ಬಗೆಗೆ ಅಭಿಮಾನ ಇರುವ ಭಾರತೀಯ ಮಾತ್ರ ತನ್ನ ರಾಜ್ಯದ ಬಗೆಗೂ ಅಭಿಮಾನ ಹೊಂದಲು ಸಾಧ್ಯ- ಪ್ರೊ. ಬಸವರಾಜ ಡೋಣೂರ


ಉಜ್ವಲ ಇತಿಹಾಸ, ಪರಂಪರೆ ಹಾಗೂ ಸಂಸ್ಕೃತಿ ಹೊಂದಿದ ಮೈಸೂರು ರಾಜ್ಯ 1956, ನವೆಂಬರ್ 1ರಂದು ಸ್ಥಾಪನೆಯಾಯಿತು. 1973, ನವೆಂಬರ್,1 ರಂದು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಪುನರ್ ನಾಮಕರಣ ಮಾಡಲಾಯಿತು. ಎಲ್ಲ ಕನ್ನಡಿಗರಿಗೂ ಈ ದಿನ ಒಂದು ಸುದಿನವಾಗಿದೆ. ಕನ್ನಡಿಗರು ಕನ್ನಡವನ್ನು ಎಲ್ಲಾ ಕ್ಷೇತ್ರಗಳಲ್ಲಿ ಬಳಸಿದಾಗ ಕನ್ನಡ ಭಾಷೆ ಬೆಳೆಯುತ್ತದೆ ಎಂದು ಹಿರಿಯ ಲೇಖಕರಾದ ಶ್ರೀನಿವಾಸ ವಾಡಪ್ಪಿ ಹೇಳಿದರು.
ಧಾರವಾಡ ಕಟ್ಟೆ ಕನ್ನಡ ರಾಜ್ಯೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಕನ್ನಡ ಉಳಿಸಿ, ಬೆಳೆಸಿದ ಮಹನೀಯರ ಕುರಿತು ಮಾತನಾಡುತ್ತಿದ್ದರು.
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ, ಭಾಷಾವಾರು ಪ್ರಾಂತ್ಯಗಳ ರಚನೆಯಾಗಿ ರಾಜ್ಯಗಳನ್ನು ವಿಭಜಿಸಲಾಯಿತು. ಆದರೆ, ಏಕೀಕೃತ ಕರ್ನಾಟಕಕ್ಕಾಗಿನ ಹೋರಾಟ, ಸ್ವಾತಂತ್ರ್ಯ ಸಿಗುವ ಮೊದಲೇ ಶುರುವಾಗಿತ್ತು. ಇಡೀ ದೇಶವೇ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದರೆ, ಕನ್ನಡಿಗರ ಮನಸ್ಸುಗಳು ಸ್ವಾತಂತ್ರ್ಯದ ಜೊತೆಗೆ ತಮ್ಮ ಅಧಿಕಾರದ ಹಕ್ಕಿನ ಸ್ಥಾಪನೆಗೂ ಹೋರಾಡುತ್ತಿದ್ದರು. ಈಗಿನ ಕರ್ನಾಟಕವು ಸ್ವಾತಂತ್ರ್ಯಪೂರ್ವದಲ್ಲಿ ಸುಮಾರು ಆಡಳಿತಾತ್ಮಕ ಘಟಕಗಳಲ್ಲಿ ಹರಿದು ಹಂಚಿ ಹೋಗಿತ್ತು. ಮೈಸೂರು ಸಂಸ್ಥಾನ, ಹೈದ್ರಾಬಾದ್‌ನ ನಿಜಾಮರು, ಬಾಂಬೆ ಪ್ರೆಸಿಡೆನ್ಸಿ, ಮದ್ರಾಸ್ ಪ್ರೆಸಿಡೆನ್ಸಿ ಮತ್ತು ಕೊಡಗು ಪ್ರಮುಖ ಆಡಳಿತ ವಿಭಾಗಗಳಾಗಿದ್ದವು. ಕನ್ನಡವನ್ನು ಅಧಿಕೃತ ಆಡಳಿತ ಭಾಷೆ ಮಾಡಿಕೊಂಡಿದ್ದ ಮೈಸೂರು ಸಂಸ್ಥಾನವನ್ನು ಹೊರತುಪಡಿಸಿಯೂ ಈಗಿನ ಕರ್ನಾಟಕದ 2/3 ಭಾಗ ಪರರ ಆಳ್ವಿಕೆಗೆ ಒಳಪಟ್ಟಿತ್ತು.
ಕನ್ನಡಿಗರು ಬಹುಸಂಖ್ಯೆಯಲ್ಲಿದ್ದರೂ, ದೊಡ್ಡ ಭೂಪ್ರದೇಶದಲ್ಲಿ ವಾಸಿಸುತ್ತಿದ್ದರೂ, ಆಡಳಿತಾತ್ಮಕ ಹಕ್ಕು ಮಾತ್ರ ಬೇರೆಯವರದ್ದಾಗಿತ್ತು. ಹುಬ್ಬಳ್ಳಿ ಕರ್ನಾಟಕವನ್ನು ಬಾಂಬೆ ಪ್ರೆಸಿಡೆನ್ಸಿ ಆಳುತ್ತಿದ್ದು, ಮರಾಠಿಯಲ್ಲೇ ವ್ಯವಹರಿಸಬೇಕಿತ್ತು. ಹೈದ್ರಾಬಾದ್ ಕರ್ನಾಟಕದಲ್ಲಿ ನಿಜಾಮರು ಒತ್ತಾಯಪೂರ್ವಕವಾಗಿ ಉರ್ದುವನ್ನು ಹೇರುತ್ತಿದ್ದರು. ಕರಾವಳಿ ಕನ್ನಡಿಗರು ಮದ್ರಾಸ್ ಪ್ರೆಸಿಡೆನ್ಸಿ ಮೂಲಕ ತಮಿಳಿನ ತುಳಿತಕ್ಕೊಳಗಾದರು. ಹೀಗಾಗಿ, ಕನ್ನಡಿಗರಲ್ಲಿ ತಮ್ಮದೇ ಆಡಳಿತ ಹೊಂದುವ, ತಮ್ಮ ಭಾಷೆ ಉಳಿಸಿಕೊಳ್ಳುವ ಕೆಚ್ಚು ಕಿಚ್ಚಾಗಿ ಉರಿಯಲಾರಂಭಿಸಿತ್ತು. ಭಾಷಾ ದಬ್ಬಾಳಿಕೆ ವಿರುದ್ಧ ಹುಟ್ಟಿದ ಆಕ್ರೋಶ ಅಂತಿಮವಾಗಿ ಕರ್ನಾಟಕ ಏಕೀಕರಣ ಚಳವಳಿಯಾಗಿ ರೂಪು ಪಡೆಯಿತು. ಕನ್ನಡ ಭಾಷಿಕ ಪ್ರದೇಶಗಳನ್ನು ಒಗ್ಗೂಡಿಸಿ ಪ್ರತ್ಯೇಕ ರಾಜ್ಯ ರೂಪಿಸಬೇಕು ಎಂಬ ಹಕ್ಕೊತ್ತಾಯ ಮೊಳಗಿತು.
ಕರ್ನಾಟಕದ ಬಹುತೇಕ ದಕ್ಷಿಣ ಭೂಭಾಗ ನಾಲ್ವಡಿ ಕೃಷ್ಣರಾಜ ಒಡೆಯರ್ ಅರಸೊತ್ತಿಗೆಯ ಮೈಸೂರು ಒಡೆಯರ್ ಸಂಸ್ಥಾನದ ಆಳ್ವಿಕೆಗೆ ಒಳಪಟ್ಟಿತ್ತು. ಇಲ್ಲಿ ಕನ್ನಡವೇ ಅಧಿಕೃತ ರಾಜಭಾಷೆಯಾಗಿತ್ತು. ಅಲ್ಲದೆ, ఆ ದಿನಗಳಲ್ಲಿ ಮೈಸೂರು ಭಾರತದಲ್ಲೇ ಅತ್ಯಂತ ಪ್ರಗತಿ ಹೊಂದಿದ ಸಂಸ್ಥಾನವಾಗಿತ್ತು. ಆದರೆ, ಉತ್ತರ ಕರ್ನಾಟಕವನ್ನು ಮುಂಬೈ ಪ್ರಾಂತ್ಯ ಸಂಪೂರ್ಣವಾಗಿ ನಿರ್ಲಕ್ಷಿಸಿತ್ತು. ಕರುನಾಡಿನ ಏಕೀಕರಣದ ಕೂಗು ಮೊದಲು ಕೇಳಿಬಂದಿದ್ದೇ ಮುಂಬೈ ಕರ್ನಾಟಕದಲ್ಲಿ, ಅರ್ಥಾತ್ ಈಗಿನ ಉತ್ತರ ಕರ್ನಾಟಕದಲ್ಲಿ.
1890ರಲ್ಲಿ ಕರ್ನಾಟಕದ ವಿದ್ಯಾವರ್ಧಕ ಸಂಘವನ್ನು ಸ್ಥಾಪಿಸಲಾಯಿತು. ಕನ್ನಡ ಭಾಷೆಯ ಪುನರುತ್ಥಾನಕ್ಕಾಗಿ ರ. ಹಾ. ದೇಶಪಾಂಡೆಯವರು ಈ ಸಂಘವನ್ನು ಸ್ಥಾಪಿಸಿದರು. ಇದೇ ಸಂಘದ ಛತ್ರದ ಅಡಿಯಲ್ಲಿ ಹಲವು ನಾಯಕರು ಒಗ್ಗೂಡಿ ಹೋರಾಟ, ಪ್ರತಿಭಟನೆಗಳನ್ನು ಆರಂಭಿಸಿದರು. ವಿದ್ಯಾವರ್ಧಕ ಸಂಘದ ಯಶಸ್ಸು ಮತ್ತು ಕೀರ್ತಿಯಿಂದಾಗಿ, ಕರುನಾಡಿನಲ್ಲಿ ಮತ್ತಷ್ಟು ಸಂಘಗಳು ಹುಟ್ಟಿಕೊಂಡವು. 1915ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹುಟ್ಟಿಕೊಂಡಿತು. ಮರುವರ್ಷ ಶಿವಮೊಗ್ಗದಲ್ಲಿ ಕರ್ನಾಟಕ ಸಂಘ ಹಾಗೂ 1955ರಲ್ಲಿ ಕಾಸರಗೋಡಿನಲ್ಲಿ ಕರ್ನಾಟಕ ಸಮಿತಿ ಆರಂಭವಾಯಿತು. 1856ರ ವೇಳೆಗೆ ಕನ್ನಡದ ಮೇಲಿನ ದಬ್ಬಾಳಿಕೆ ವಿರುದ್ಧ ಅಸಹನೆ ಮತ್ತು ಪ್ರತಿಭಟನೆಗಳು ಆರಂಭವಾಗಿದ್ದವು.ಆದರೆ, ಇದಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ಚಳವಳಿಯ ರೂಪ ಪಡೆದಿದ್ದು‌ ಆಲೂರು ವೆಂಕಟರಾವ್ ಅವರ ಪ್ರವೇಶದೊಂದಿಗೆ ಅಲ್ಲಿಯವರೆಗೆ ಕನ್ನಡದ ಉಳಿವಿಗಾಗಿ ನಡೆಯುತ್ತಿತ್ತು. ವಿದ್ಯಾವರ್ಧಕ ಹೋರಾಟ 1903ರಲ್ಲಿ ಸಂಘದ ಸಭೆಯೊಂದರಲ್ಲಿ ಮಾತನಾಡಿದ ಆಲೂರು ಅವರು, ಕನ್ನಡ ಭಾಷಿಕ ಎಲ್ಲಾ ಪ್ರದೇಶಗಳನ್ನು ಮೈಸೂರು ಸಂಸ್ಥಾನದೊಂದಿಗೆ ಸೇರಿಸಬೇಕು ಎಂಬ ಬೇಡಿಕೆ ಮುಂದಿಟ್ಟರು. ಬಂಗಾಳದ ವಿಭಜನೆಯ ಸ್ಫೂರ್ತಿ ಪಡೆದ ಆಲೂರು ಅವರು, ಏಕೀಕರಣಕ್ಕಾಗಿ ಹೋರಾಟದ ನೇತೃತ್ವ ವಹಿಸಿದರು. 1907 ಮತ್ತು1908ರಲ್ಲಿ ಆಲೂರು ಅವರು ಕರ್ನಾಟಕ ಬರಹಗಾರರ ಸಮ್ಮೇಳನವನ್ನು ಧಾರವಾಡದಲ್ಲಿ ಆಯೋಜಿಸಿದರು. ದೇಶಪಾಂಡೆ ಮತ್ತು ವಿದ್ಯಾವರ್ಧಕ ಸಂಘದಿಂದ ಸ್ಫೂರ್ತಿ ಪಡೆದ ಆಲೂರು ಅವರು 1915ರಲ್ಲಿ ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪಿಸುವಲ್ಲಿ ಮಹತ್ವದ ಪಾತ್ರವಹಿಸಿದರು. ಮೈಸೂರು ದೊರೆ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸಾಹಿತ್ಯ ಪರಿಷತ್ ನೇತೃತ್ವ ವಹಿಸುವುದರೊಂದಿಗೆ ಈ ಸಂಸ್ಥೆ ರಾಜಾಶ್ರಯವನ್ನಷ್ಟೇ ಅಲ್ಲ, ಗಟ್ಟಿ ತಳಹದಿಯನ್ನೂ ಪಡೆಯಿತು.
ಗುಡ್ಡೆಪ್ಪ ಹಳ್ಳಿಕೇರಿ, ಸಿದ್ದಪ್ಪ ಕಂಬಳಿ, ಆರ್. ಹೆಚ್. ದೇಶಪಾಂಡೆ, ರಂಗರಾವ್‌ ದಿವಾಕರ್, ಶ್ರೀನಿವಾಸ್‌ರಾವ್ ಕೌಜಲಗಿ,, ಶ್ರೀನಿವಾಸ್ ರಾವ್ ಮಂಗಳ್ವಾಡೆ, ಕೆಂಗಲ್ ಹನುಮಂತಯ್ಯ, ಗೋರೂರು ರಾಮಸ್ವಾಮಿ ಅಯ್ಯಂಗಾರ್, ಎಸ್ ನಿಜಲಿಂಗಪ್ಪ, ಮರಿಯಪ್ಪ, ಸುಬ್ರಮಣ್ಯ, ಸಾಹುಕಾರ್ ಚೆನ್ನಯ್ಯ, ಬಿ.ವಿ ಕಕ್ಕಿಲ್ಲಾಯ, ಆ.ನ.ಕೃ ಹೀಗೆ ಹಲವರು ತಮ್ಮದೇ ರೀತಿಯಲ್ಲಿ ಕನ್ನಡ ಪರ ಹೋರಾಟಕ್ಕೆ ಧುಮುಕಿದರು. ಹೀಗೆ ಅನೇಕ ಕನ್ನಡ ಮನಸ್ಸುಗಳು ಒಗ್ಗೂಡಿ ಕನ್ನಡ ಕಟ್ಟುವ ಕೆಲಸದಲ್ಲಿ ತೊಡಗಿ, ಅದನ್ನು ಉಳಿಸು, ಬೆಳೆಸಿದರು ಎಂದು ವಾಡಪ್ಪಿ ಹೇಳಿದರು.
ಧಾರವಾಡ ಕಟ್ಟೆಯ ಗೌರವಾಧ್ಯಕ್ಷ ಪ್ರೊ. ಬಸವರಾಜ ಡೋಣೂರ ಮಾತನಾಡಿ ಕನ್ನಡಿಗರಾಗಿ ಕನ್ನಡ ಭಾಷೆ, ಕರ್ನಾಟಕ ರಾಜ್ಯದ ಬಗೆಗೆ ಅಭಿಮಾನ ಹಾಗೂ ಗೌರವ ಹೊಂದಿರುವಂತೆ ಅಖಂಡ ಭಾರತದ ಬಗೆಗೂ ಅಷ್ಟೇ ಅಭಿಮಾನ ಹಾಗೂ ಗೌರವ ಹೊಂದಿರಬೇಕಾಗಿರುವುದು ನಿಜವಾದ ಭಾರತೀಯನ ಆದ್ಯ ಕರ್ತ್ಯವ್ಯವಾಗಿದೆ. ದೇಶವಿಲ್ಲದೆ, ಪ್ರಾಂತ್ಯಗಳಿಗೆ ಅಸ್ಥಿತ್ವವೇ ಇಲ್ಲ ಎನ್ನುವ ಸತ್ಯವನ್ನು ಭಾರತಿಯರು ಮಾನಗಾಣಬೇಕು ಎಂದು ಹೇಳಿದರು.
ಒಂದು ದೇಶವನ್ನು ಪ್ರಾಂತಗಳನ್ನಾಗಿ ವಿಭಜನೆ ಮಾಡಿರುವ ಉದ್ದೇಶ, ಒಂದೇ ಭಾಷೆ, ಸಂಸ್ಕೃತಿ, ಆಚರಣೆ ಹಾಗೂ ಸಾಮಾಜಿಕ ವ್ಯವಸ್ಥೆ ಹೊಂದಿದ ಜನರನ್ನು ಒಂದು ಭೌಗೋಳಿಕ ಪರಿಸರದಲ್ಲಿ ವಾಸಿಸಿದರೆ, ಒಂದು ರಾಜಕೀಯ ಸಮುದಾಯವಾಗಿ ಒಗ್ಗೂಡಿ ಬಾಳಿದರೆ ಜನರು ನೆಮ್ಮದಿಯ ಜೀವನ ನೆಡಸಬಹುದು, ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ, ಭಾಷಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಅಭಿವೃದ್ಧಿ ಹೊಂದಬಹುದು ಎಂಬುದು ಏಕೀಕರಣದ ಉದ್ದೇಶವಾಗಿತ್ತು. ಒಂದು ಭಾಷೆಯನ್ನು ಆಡುವ ಜನರು ಭಾರತೀಯ ಅನ್ಯ ಭಾಷೆಗಳನ್ನು ಆಡುವ ಜನರನ್ನು ದ್ವೇಷಿಸಬೇಕು, ಹಿಂಸಿಸಬೇಕು ಎಂಬುದು ಭಾಷಾವಾರು ಪ್ರಾಂತಗಳ ರಚನೆಯ ಉದ್ದೇಶವಾಗಿರಲಿಲ್ಲ.
ಭಾಷೆಯ ಆಧಾರದ ಮೇಲೆ ಒಬ್ಬ ಭಾರತೀಯ ಇನ್ನೊಬ್ಬ ಭಾರತಿಯನನ್ನು ದ್ವೇಷಿಸುವುದಾದರೆ ಆ ವ್ಯಕ್ತಿ ನಿಜವಾದ ಭಾರತಿಯನಾಗಿರಲು ಸಾಧ್ಯವಿಲ್ಲ. ಕನ್ನಡಿಗರು ಕನ್ನಡ ಭಾಷೆಯನ್ನು ಬೆಳೆಸಬೇಕಾದರೆ ಮೊದಲು ಅಲ್ಲಿನ ಸಮಸ್ಯೆಗಳ ಬಗೆಗೆ ಹಾಗೂ ಅವುಗಳಿಂದ ಹೇಗೆ ಹೊರಬರಬೇಕು ಎನ್ನುವ ಬಗೆಗೆ ಸ್ಪಷ್ಟವಾದ ತಿಳುವಳಿಕೆ ಹೊಂದಬೇಕು. ಕನ್ನಡಿಗರು ಬಹಳ ಉದಾರಿಗಳು. ಅನೇಕ ಕನ್ನಡಿಗರಿಗೆ ಕನ್ನಡ ಭಾಷೆಯ ಬಗೆಗೆ ನಿಜವಾದ ಅಭಿಮಾನ ಇಲ್ಲದಿರುವುದು ವಿಷಾದದ ಸಂಗತಿಯಾಗಿದೆ.
ಭಾರತೀಯರಿಗೆ ಎರಡು ಅಸ್ಮೀತೆಗಳಿಲ್ಲ. ಅವರಿಗಿರುವುದು ಒಂದೇ ಅಸ್ಮೀತೆ. ಅದೇ ಭಾರತೀಯ ಅಸ್ಮೀತೆ. ಭಾರತದ ಅಸ್ಮೀತೆಗೆ ಕೊಡಲಿ ಪೆಟ್ಟು ಹಾಕಿ ನಾವು ಕರ್ನಾಟಕ, ಮಹಾರಾಷ್ಟ್ರ, ಕೇರಳ, ಬೆಂಗಾಳ ಅಥವಾ ತಮಿಳು ನಾಡಿನ ಅಸ್ಮೀತೆ ಹೊಂದುವ ಅಗತ್ಯವಿಲ್ಲ. ದೇಶದ ಹಿತಾಸಕ್ತಿ, ಕಾಳಜಿ ಮತ್ತು ಅಸ್ಮೀತೆ ಬಲಿಕೊಟ್ಟು ಪ್ರಾದೇಶಿಕ ಹಿತಾಸಕ್ತಿ ಮತ್ತು ಕಾಳಜಿ ರಕ್ಷಿಸುವ ಅಗತ್ಯವಿಲ್ಲ. ಭಾರತದ ರಾಷ್ಟ್ರಪ್ರೇಮದ ಬಗ್ಗೆ ಸ್ಪಷ್ಟವಾದ ಅರಿವು ಇದ್ದಿದ್ದರಿಂದಲೇ ಕುವೆಂಪು ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ ಎಂದು ಹೇಳಿದರು. ಕರ್ನಾಟಕ ಮಾತೆ ಭಾರತಮಾತೆಯ ಮಗಳು ಎಂದು ಕುವೆಂಪು ಹೇಳಿದರು. ಆದರೆ ಕರ್ನಾಟಕ ಮಾತೆಯನ್ನೂ ಒಪ್ಪದ ಭಾರತಮಾತೆಯನ್ನೂ ಗೌರವಿಸದವರು ಕರ್ನಾಟಕ ರಾಜ್ಯೋತ್ಸವದ ಬಗ್ಗೆ ಮಾತನಾಡುತ್ತಿದ್ದಾರೆ.
ಪ್ರಾದೇಶಿಕತೆ ದೇಶದ ಅಖಂಡತೆಗೆ ಮತ್ತು ದೇಶದ ಒಕ್ಕೂಟ ವ್ಯವಸ್ಥೆಗೆ ದಕ್ಕೆ ತರುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ದೇಶದ ಪ್ರಧಾನಿಯ ಬಗ್ಗೆ ಅತ್ಯಂತ ಕೀಳು ಮಟ್ಟದ ಭಾಷೆಯನ್ನು ಪ್ರಯೋಗ ಮಾಡುವ, ರಾಷ್ಟ್ರದ ಹಿತದಲ್ಲಿ ಕೇಂದ್ರ ಸರ್ಕಾರ ಕೈಕೊಂಡ ಕ್ರಮಗಳನ್ನು ಜಾರಿಗೊಳಿಸದಂತೆ ತೀರ್ಮಾನ ತೆಗೆದುಕೊಳ್ಳುವುದರ ಮೂಲಕ ಪ್ರಾದೇಶಿಕ ಪಕ್ಷಗಳು ಆಡಳಿತದಲ್ಲಿರುವ ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರವನ್ನು ದುರ್ಬಲಗೊಳಿಸುತ್ತಿವೆ. ಪ್ರಾದೇಶಿಕ ಪಕ್ಷಗಳು ಆಯಾ ರಾಜ್ಯದಲ್ಲಿ ತಮ್ಮ ಕುಟುಂಬ ಕೇಂದ್ರೀತ ಮತ್ತು ಕುಟುಂಬದ ಹಿತಾಸಕ್ತಿ ಪೋಷಿತ ಆಡಳಿತ ನಡೆಸುತ್ತಿವೆ. ಈಗಿನ ಪ್ರಾದೇಶಿಕ ಪಕ್ಷಗಳಿಗೂ ಆಗಿನ ರಾಜಮನೆತನಗಳಿಗೂ ರಾಜಕೀಯವಾಗಿ ವ್ಯತ್ಯಾಸವೇ ಇಲ್ಲ. ಆದರೆ ಆ ಕಾಲದ ರಾಜರು ಪ್ರಜೆಗಳ ಸಲುವಾಗಿ ಮಾಡಿದ ಸೇವೆ, ತ್ಯಾಗ ಈ ಕಾಲದ ಪ್ರಾದೇಶಿಕ ಪಕ್ಷಗಳು ಮಾಡುತ್ತಿಲ್ಲ. ಸಕಾಲದಲ್ಲಿ ಜನರು ಎಚ್ಚೆತ್ತುಕೊಳ್ಳದಿದ್ದರೆ ಪ್ರಾದೇಶಿಕತೆ ದೇಶದ ವಿಭಜನೆಗೆ ದಾರಿ ಮಾಡಿ ಕೊಡಬಹುದು, ಭಾಷೆಗಳ ಹೆಸರಿನಲ್ಲಿ ದೇಶ ಒಡೆದು ಹೋಗಬಹುದು. ಧರ್ಮದ ಆಧಾರದ ದೇಶ ಇಬ್ಭಾಗ ಮಾಡಿದ್ದಾಗಿದೆ. ಈಗ ಜಾತಿಗಳ ಆಧಾರದ ಮೇಲೆ ದೇಶ ಒಡೆಯಲು ಮುಂದಾಗಿದ್ದೇವೆ. ಕಟ್ಟಲು ನಮಗೆ ಪ್ರೇರಣೆಗಳೇ ಇಲ್ಲ. ಒಡೆಯಲು ಹತ್ತಾರು ಪ್ರೇರಣೆಗಳು. ಇಂಥ ಮನಸ್ಥಿತಿ ಬದಲಾಗಬೇಕು. ಕನ್ನಡವನ್ನು ಪ್ರೀತಿಸುತ್ತ, ಬೆಳೆಸುತ್ತ ಭಾರತೀಯತ್ವ ಉಸಿರಾಡುತ್ತ ಅಖಂಡ, ಸುಭದ್ರ ಭಾರತ ಕಟ್ಟುವ ನಿಟ್ಟಿನಲ್ಲಿ ನಮ್ಮ ಶಕ್ತಿ ಸಾಮರ್ಥ್ಯ ವಿನಿಯೋಗ ಮಾಡಬೇಕು.
ಕನ್ನಡ ಮಾಧ್ಯಮದ ಶಾಲೆಗಳು ಮುಚ್ಚಿ ಹೋಗುತ್ತಿವೆ. ಈ ಕುರಿತು ಕನ್ನಡಿಗರು ಯೋಚಿಸಬೇಕಿದೆ. ಅಲ್ಲಿರುವ ಸಮಸ್ಯೆಗಳ ಬಗೆಗೆ, ಅವುಗಳನ್ನು ಪರಿಹರಿಸುವುದರ ಬಗೆಗೆ ಎಲ್ಲ ಕನ್ನಡಿಗರು ಒಕ್ಕೊರಲಿನಿಂದ ಕೆಲಸ ಮಾಡಬೇಕಿದೆ ಎಂದು ಡೋಣೂರ ಹೇಳಿದರು.
ಕಾರ್ಯಕ್ರಮದಲ್ಲಿ ನಾಗರಾಜ, ಸಂಜೀವ ರಾಯಪ್ಪ, ವಿದ್ಯಾ, ದಾನೇಶ್ವರಿ ಸಾರಂಗಮಠ, ರಂಗನಾಥ, ಸಂಗನಗೌಡ ಹಿರೇಗೌಡರ, ಸಚಿನ್, ಶಂಕರ್ ಸೇರಿದಂತೆ ಅನೇಕ ಮಹನೀಯರು ಭಾಗವಿಹಿಸಿದ್ದರು. ಸದಸ್ಯ ಕಾರ್ಯದರ್ಶಿ ಸಿದ್ದಣ್ಣ ವಾಡೆದ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ವಿಜಯಲಕ್ಷ್ಮೀ ದಾನರಡ್ಡಿ, ಕಾರ್ಯದರ್ಶಿ ಪ್ರಕಾಶ ಸಿ. ಬಾಳಿಕಾಯಿ ಶಿವರಾಜ ಸಣಮನಿ, ಪ್ರತಿಭಾ ತಾಂತ್ರಿಕ ನೆರವು ನೀಡಿದರು

Additional Details

Event Poster -

Event registration closed.
 

Date And Time

01-11-2023 @ 06:00 PM to
01-11-2023 @ 09:00 PM
 

Registration End Date

01-11-2023
 

Location

Online event
 

Event Types

 
Watch video
 

Share With Friends

Scroll to Top